ಮನೋಶಾರೀರಿಕ ವಿಜ್ಞಾನ - 
ವ್ಯಕ್ತಿಯ ಸಂವೇಗಾನುಭವಗಳು ಅವನ ಶಾರೀರಿಕ ಕ್ರಿಯೆಗಳ ಮೇಲೆ ಉಂಟುಮಾಡುವ ಪರಿಣಾಮಗಳ ಅಧ್ಯಯನ (ಸೈಕೊಸೊಮ್ಯಾಟಿಕ್ಸ್). ಮಾನಸಿಕ ಮತ್ತು ಸಂವೇಗಾತ್ಮಕ ಕಾರಕಗಳಿಂದ ಮೂಡಿ ಬರುವ ಶಾರೀರಿಕ ರೋಗಗಳು ಅರ್ಥಾತ್ ಮನೋಜನ್ಯ ಶಾರೀರಿಕ ರೋಗಗಳು ಕೇಂದ್ರಬಿಂದು.

ದೈಹಿಕ, ಮನೋಸಾಮಾಜಿಕ ಮತ್ತು ಸಾಮಾಜಿಕ-ಸಾಂಸ್ಕøತಿಕ ಕಾರಕಗಳನ್ನು ಗಣನೆಗೆ ತೆಗೆದುಕೊಂಡು ಮನೋಜನ್ಯ ಶಾರೀರಿಕ ರೋಗಗಳನ್ನು ಕುರಿತು ಮಾಡುವ ಅಧ್ಯಯನಗಳನ್ನು ಮನೋಶಾರೀರಿಕ ಎಂಬ ಪದ ಪ್ರಯೋಗದಿಂದಲೂ ನಿರ್ದಿಷ್ಟ ರೋಗಗಳನ್ನು ವಿವರಿಸುವಾಗ `ಮನೋಶಾರೀರಿಕಕ್ರಿಯಾ (ಸೈಕೋಫಿಸಿಯಾಲಜಿಕಲ್) ಎಂಬ ಪದ ಪ್ರಯೋಗದಿಂದಲೂ ಕರೆಯಬೇಕೆಂದು ಅಮೆರಿಕದ ಮನೋರೋಗ ಚಿಕಿತ್ಸಕರ ಅಭಿಮತವಾಗಿದೆ. ಕೆಲವೆಡೆ `ಕಾರ್ಟಿಕೋವಿಸೆರಲ್ ಎಂಬ ಪದವನ್ನು ಇವೆರಡಕ್ಕೆ ಸಮಾನಾರ್ಥಪದವಾಗಿ ಬಳಸುತ್ತಾರೆ. `ಮನೋಶಾರೀರಿಕ ಎಂಬುದು ಹೆಚ್ಚು ಬಳಕೆಯಲ್ಲಿರುವ ಪದ.

ಅಮೆರಿಕದ ಮನೋರೋಗ ಚಿಕಿತ್ಸಕರ ಸಂಘ ಮನೋಶಾರೀರಿಕ ರೋಗಗಳನ್ನು ಹತ್ತು ವರ್ಗಗಳಾಗಿ ವಿಂಗಡಿಸಿದೆ. 1. ಮನೋಶಾರೀರಿಕ ಕ್ರಿಯಾ ಚರ್ಮರೋಗಗಳು. ಉದಾಹರಣೆಗೆ ನ್ಯೂರೊಡರ್ಮೆಟಾಸಿನ್, ಎಕ್ಸಿಮಾ, ಅಟಾಪಿಕ್ ಡರ್ಮಟೈಟಿಸ್, ಕೆಲವು ನಮೂನೆಯ ಮೊಡವೆಗಳು. 2. ಮನೋಶಾರೀರಿಕ ಕ್ರಿಯಾ ಸ್ನಾಯು ಅಸ್ಥಿ ರೋಗಗಳು. ಉದಾಹರಣೆಗೆ ಬೆನ್ನುನೋವು, ಸ್ನಾಯುಸೆಳೆತ (ಕ್ರಾಂಪ್), ತಲೆನೋವು, ಆರ್ತ್‍ರೈಟಿಸ್‍ನ ಕೆಲವು ನಮೂನೆಗಳು, 3. ಮನೋಶಾರೀರಿಕಕ್ರಿಯಾ ಶ್ವಾಸಕ್ರಿಯಾ ಸಂಬಂಧಿ ರೋಗಗಳು. ಉದಾಹರಣೆಗೆ ಬ್ರಾಂಕಿಯಲ್ ಅಸ್ತಮಾ, ಬಿಕ್ಕಳಿಕೆ ಆಗಾಗ್ಗೆ ಮರುಕಳಿಸುವ ಬ್ರಾಂಕಾಯಟಲ್. 4. ಮನೋಶಾರೀರಿಕ ಕ್ರಿಯಾ ಕಾರ್ಡಿಯೋವ್ಯಾಸ್ಕ್ಯುಲರ್ ರೋಗಗಳು ಉದಾಹರಣೆಗೆ ಅರೆದಲೆನೋವು (ಮೈಗ್ರೆನ್‍ಹೆಡ್‍ಏಕ್) ಹೃದಯಾಘಾತ, ಹೈಪರ್‍ಟೆನ್ಷನ್, ರಕ್ತನಾಳಗಳ ಸೆಳೆವು (ವ್ಯಾಸ್ಕುಲರ್ ಸ್ಪಾಸ್ಮ್) 5. ಮನೋಶಾರೀರಿಕ ಕ್ರಿಯಾ ಹೆಮಿಕ್ ಮತ್ತು ಲಿಂಫೇಟಿಕ್ ರೋಗಗಳು. ಉದಾಹರಣೆಗೆ ಲಿಂಫ್ ಪ್ಯೊಹ ಮತ್ತು ರಕ್ತ ಪರಿಚಲನಾ ವ್ಯೂಹದ ಕ್ರಿಯೆಗಳಲ್ಲಿ ಕ್ಷೋಭೆ. 6. ಮನೋಶಾರೀರಿಕ ಕ್ರಿಯಾಜಠರ ಕರುಳು ರೋಗಗಳು. ಉದಾಹರಣೆಗೆ ಜಠರ ಕರುಳು ಹುಣ್ಣು, ತೀವ್ರ ಗ್ಯಾಸ್ಟ್ರೈಟಿಸ್, ಮ್ಯೂಕಸ್ ಕೊಲೈಟಿಸ್. 7. ಮನೋಶಾರೀರಿಕ ಪ್ರಜನಾಂಗ ಮೂತ್ರವಿಸರ್ಜನಾ ವ್ಯೂಹದ ರೋಗಗಳು. ಉದಾಹರಣೆಗೆ ಋತುಸ್ರಾವ ಮತ್ತು ಮೂತ್ರ ವಿಸರ್ಜನೆ ಅಸ್ತವ್ಯಸ್ತವಾಗುವುದು. 8. ಮನೋಶಾರೀರಿಕ ಕ್ರಿಯಾ ನಿರ್ನಾಳ ಗ್ರಂಥಿ ಸಂಬಂಧೀ ರೋಗಗಳು. ಉದಾಹರಣೆಗೆ ಹೈಪರ್ ತೈರ್ಯಾಡಿಸಮ್, ಬೊಜ್ಜು, 9. ಮನೋಶಾರೀರಿಕ ಕ್ರಿಯಾ ಜ್ಞಾನೇಂದ್ರಿಯ ಸಂಬಂಧಿ ರೋಗಗಳು. ಉದಾಹರಣೆಗೆ ಕಣ್ಣಿನ ಆದ್ರ್ರಪೊರೆಯ ತೀವ್ರ ಊತ (ಕಂಜಕ್ಟಿವೈಟಿಸ್). 10. ಇತರ ವಿಧದ ಮನೋಶಾರೀರಿಕ ಕ್ರಿಯಾ ರೋಗಗಳು. ಉದಾಹರಣೆಗೆ ನರಮಂಡಲದ ಚಟುವಟಿಕೆಗಳು ಅಸ್ತವ್ಯಸ್ತವಾಗುವುದು.

ಮನೋಶಾರೀರಿಕ ರೋಗಗಳು ಹೇಗೆ ಉದ್ಬವಿಸುತ್ತವೆ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡಲು ಸಾಧ್ಯವಿಲ್ಲ. ವ್ಯಕ್ತಿಯಲ್ಲಿ ಜೀವನದ ಕೆಲವು ಒತ್ತಡಗಳು ತೀವ್ರ ಭಯವನ್ನು ಉತ್ಪಾದಿಸುತ್ತವೆ. ತತ್ಪರಿಣಾಮವಾಗಿ ವ್ಯಕ್ತಿ ತೀವ್ರ ಸಂವೇಗಾತ್ಮಕ ತುಯ್ತಕ್ಕೆ ತುತ್ತಾಗುತ್ತಾನೆ. ತತ್ಪರಿಣಾಮವಾಗಿ ಶಾರೀರಿಕ ಕ್ರಿಯೆಗಳು ಅಸ್ತವ್ಯಸ್ತವಾಗಿ ರೋಗಗಳು ಉಂಟಾಗುತ್ತವೆ. ಯಾವ ವ್ಯಕ್ತಿಯಲ್ಲಿ ಎಂಥ ಸಂವೇಗಾತ್ಮಕ ತುಯ್ತ ಯಾವ ಮನೋಶಾರೀರಿಕ ರೋಗವನ್ನು ಉಂಟುಮಾಡುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸಾರ್ವತ್ರಿಕವಾಗಿ, ಮನೋಶಾರೀರಿಕ ರೋಗ ಈ ಕೆಳಗಿನ ಘಟನಾಸರಣಿಯನ್ನು ಒಳಗೊಂಡಂತೆ ತೋರುತ್ತದೆ.

1. ಮಾನಸಿಕ ಒತ್ತಡ ಉಂಟುಮಾಡಬಲ್ಲ ಸನ್ನಿವೇಶಗಳಿಂದ ಋಣಾತ್ಮಕ ಸಂವೇಗಗಳ ಉದ್ದೀಪನೆ-ಸನ್ನಿವೇಶದ ಸ್ವರೂಪ, ವ್ಯಕ್ತಿ ಆ ಸನ್ನಿವೇಶವನ್ನು ನೋಡುವ ದೃಷ್ಟಿಕೋನ, ವ್ಯಕ್ತಿಯ ಒತ್ತಡ ಸಹಿಷ್ಣುತೆ ಸಾಮಥ್ರ್ಯ ಈ ಘಟನೆಯ ಮೇಲೆ ಪ್ರಭಾವ ಬೀರುವ ಕಾರಕಗಳು
. 

2. ಉದ್ದೀಪಿತ ಋಣಾತ್ಮಕ ಸಂವೇಗಗಳನ್ನು ನಿಭಾಯಿಸಲು ಅಸಮರ್ಥನಾಗುವುದು. ತತ್ಪರಿಣಾಮವಾಗಿ ತುಯ್ತ ತೀವ್ರವಾಗುವುದು. 

3. ತೀವ್ರ ತುಯ್ತ ಯಾವುದಾದರೊಂದು ಅಂಗ ಅಥವಾ ಅಂಗವ್ಯೂಹದ ಮೇಲೆ ಸಾಂದ್ರೀಕೃತ ಪ್ರಭಾವ ಬೀರುವುದು.
ಮನೋಶಾರೀರಿಕ ರೋಗಗಳ ಉತ್ಪತ್ತಿಯ ಮೇಲೆ ಈ ಕೆಳಗೆ ನಮೂದಿಸಿದ ಕಾರಕಗಳು ಕೂಡ ಪ್ರಭಾವ ಬೀರುತ್ತವೆ ಎಂಬುದಕ್ಕೆ ಪರೋಕ್ಷ ಆಧಾರಗಳಿವೆ.

1. ಜೀವ ವೈಜ್ಞಾನಿಕ ಕಾರಕಗಳು -ಅನುವಂಶೀಯತೆ, ಪ್ರಧಾನ ಪ್ರತಿಕ್ರಿಯಾ ಪ್ರವೃತಿಗಳಲ್ಲಿ (ಪ್ರೈಮರಿ ರೀಅಕ್ಷನ್ ಟೆಂಡೆನ್ಸೀಸ್) ಇರುವ ವ್ಯಕ್ತಿ ವ್ಯತ್ಯಾಸಗಳು, ನಿರ್ದಿಷ್ಟ ಅಂಗವ್ಯೂಹದ ದೌರ್ಬಲ್ಯಗಳು, ಕಾರ್ಟಿಕೋವಿಸರಲ್ ನಿಯಂತ್ರಣ ವ್ಯವಸ್ಥೆಯ ಅಸಮರ್ಪಕತೆ. 

2. ಮನೋಸಾಮಾಜಿಕ ಕಾರಕಗಳು - ವ್ಯಕ್ತಿತ್ವ ಲಕ್ಷಣಗಳು, ಸಂವೇಗಾತ್ಮಕ ಒತ್ತರಗಳನ್ನು ನಿಭಾಯಿಸಬಲ್ಲ ಸಾಮಥ್ರ್ಯ, ಒತ್ತಡದ ಸ್ವರೂಪ, ಅಂತರವ್ಯಕ್ತಿ ಸಂಬಂಧಗಳು, ಅನೈಚ್ಚಿಕ ಕ್ರಿಯೆಗಳಿಗೆ ಸಂಬಂಧಿಸಿದಂತೆ ನಡೆಯುವ ಸೋಪಾದಿತ ಕಲಿಕೆಗಳು. 

3 ಸಾಮಾಜಿಕ ಸಾಂಸ್ಕøತಿಕ ಕಾರಕಗಳು -ಕಾರಕಗಳನ್ನು ನಿಖರವಾಗಿ ಪಟ್ಟಿಮಾಡುವುದು ಕಷ್ಟ. ಅತಿವೇಗದ ಸಾಮಾಜಿಕ ಸಾಂಸ್ಕøತಿಕ ಬದಲಾವಣೆ, ಜೀವನಕ್ರಮ ಈ ರೋಗಗಳ ಮೇಲೆ ಪ್ರಭಾವ ಬೀರುತ್ತವೆ ಎಂಬ ಸಂಶಯವಿದೆ. 

4 ಮನೋಶಾರೀರಿಕ ರೋಗಗಳ ಚಿಕಿತ್ಸೆಯಲ್ಲಿ ಮನೋರೋಗ ಚಿಕಿತ್ಸಾ ತಂತ್ರಗಳು ಮತ್ತು ಶಾರೀರಿಕ ರೋಗ ತಂತ್ರಗಳೆರಡನ್ನೂ ಬಳಸಲಾಗುತ್ತದೆ.
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ